ರಾಜ್ಯದ ತಾಂಡಾಗಳ ಅಭಿವೃದ್ಧಿಗೆ 300 ಕೋಟಿ ಪ್ರಸ್ತಾವನೆ : ಭೀಮಾನಾಯ್ಕ.
ಕ್ಷೇತ್ರದ ಶಾಸಕನಾಗಿ ರೈತರ ಜಮೀನಿಗೆಶಾಶ್ವತ ನೀರು ಕಲ್ಪಿಸುವ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸಲಾಗುವುದು. ಹಾಗೆ ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬಂಜಾರ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ ಸಲ್ಲಿಸಲಾಗುವುದು ಎಂದು ತಾಂಡ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಭೀಮಾ ನಾಯ್ಕ ತಿಳಿಸಿದರು. ಬೆಂಗಳೂರಿನಲ್ಲಿ ತಮ್ಮ ನಿಗಮ ದ ಕಛೇರಿಯಲ್ಲಿ ಹೊಸ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಶ್ರಮಿಕ ಸಮಾಜವಾದ ಬಂಜಾರ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ನಿಗಮದಿಂದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ಬಳ್ಳಾರಿ ಕೇಂದ್ರ ಸ್ಥಾನ ಮತ್ತು ಹಗರಿಬೊಮ್ಮನಹಳ್ಳಿಯಲ್ಲಿ ಬಂಜಾರ ಸಮುದಾಯದ ಸಮುದಾಯ ಭವನ ನಿರ್ಮಿಸಲಾಗುವುದು ಈ ನಿಟ್ಟಿನಲ್ಲಿ ಈಗಾಗಲೇ ಅನುದಾನ ಒದಗಿಸಲಾಗಿದೆ ಎಂದರು. ತಾಂಡಾಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ ಮೂರು ನೂರು ಕೋಟಿ ರೂಪಾಯಿ ಎಸ್ಇಪಿ ಟಿಎಸ್ಪಿ ಅನುದಾನ ಕೋರಲಾಗಿದೆ. ಈ ಕುರಿತಂತೆ ಸಮಾಜ ಕಲ್ಯಾಣ ಖಾತೆ ಸಚಿವ ಪ್ರಿಯಾಂಕ ಖರ್ಗೆ ಅವರ ಬಳಿ ನಿಯೋಗ ತೆರಳಿ ಚರ್ಚಿಸಲಾಗುವುದು. ಈಗಾಗಲೇ ನಿಗಮದ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನಾ ವರದಿ ಮತ್ತು ಮಾಹಿತಿ ಸಂಗ್ರಹಿಸಲಾಗಿದೆ. ಸಮುದಾಯದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೂರಕವಾಗಿ ಐಎಎಸ್ ಮತ್ತು ಐಪಿಎಸ್ ಕೋಚಿಂಗ್ ತರಬೇತಿ ಕೇಂದ್ರ ತೆರೆಯಲಾಗುವುದು. ಯಾವ ಪ್ರದೇಶದಲ್ಲಿ ಕೋಚಿಂಗ್ ಕೇಂದ್ರ ಆರಂಭಿಸಬೇಕು ಎಂಬುದನ್ನು ಶೀಘ್ರದಲ್ಲಿ ನಡೆಸಲಾಗುವುದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಕ್ಕಿ ತೋಟೇಶ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೋಟಗನಹಳ್ಳಿ ಕೊಟ್ರೇಶ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ದೇವೇಂದ್ರಪ್ಪ ಮುಖಂಡರಾದ ಕನ್ಹಳ್ಳಿ ಚಂದ್ರಶೇಖರ ರೋಗಣಿ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು